Tuesday, July 28, 2009

Flashback-2

ಸರಿ ಸ್ಕೂಲ್ ಸೇರ್ಕೊಂಡಿದ್ದು ಆಯಿತು.ಸ್ಕೂಲ್ನಲ್ಲಿ ಕೆಲವರನ್ನ ನೋಡಿದ್ರೆ ಅಸೂಯೆ ಆಗ್ತಿತ್ತು .ಉಪಾಧ್ಯಾಯರೆಲ್ಲ ಕೆಲವರಿಗೆ ಮಾತ್ರ ಮನ್ನಣೆ ಕೊಡುತ್ತಿದ್ದನ್ನ ನೋಡಿ ನನ್ನಲ್ಲಿ ಏನು ಕಮ್ಮಿ ಇದೆ ಅನ್ನಿಸಕ್ಕೆ ಶುರು ಆಯಿತು. ಸ್ಕೂಲ್ ಡೇ ಅಂತ ಮಾಡಿರೆ ಹರಸಾಹಸ ಮಾಡುತ್ತಿದ್ದೆ ಯಾವದಾರು ಕಾರ್ಯಕ್ರಮದಲ್ಲಿ ಭಾಗವಹಿಸಲೇ ಬೇಕು ಅಂತ . ಬಾಲೋಧ್ಯಾನ ನನ್ನ ಶಾಲೆಯ ಹೆಸರು.ಹೇಗಾರು ಮಾಡಿ ಯಾವುದಾರು ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಲೇ ಬೇಕು ಅಂತ ತವಕ ಇರುತ್ತಿತ್ತು. ಆ ಅವಕಾಶ ಒದಗಿ ಬಂದದ್ದು ಒಂದೇ ಸಲ ,ಸಮೂಹ ಗಾಯನ ಸ್ಪರ್ಧೆಯಲ್ಲಿ -ಹಾಡಿದ್ದ ಹಾಡು ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ,ಜೊತೆಯಲ್ಲಿ ಹಾಡಿದ್ದು ಸರಳ ಅನ್ನೋ ಒಬ್ಬ ಹುಡುಗಿ ಮತ್ತೆ ಯಾರಿದ್ದರೋ ನೆನಪಿಲ್ಲ . ಬಹುಮಾನ ಅಂತ ಒಂದು ಟಾರ್ಚ್ ಕೊಟ್ಟಿದ್ದರು .ಪ್ರಾಯಶಃ ಕನ್ನಡ ರಾಜ್ಯೋತ್ಸವದ ನಿಮಿತ್ತ ಸ್ಪರ್ಧೆ ಇತ್ತು ಅನ್ನಿಸತ್ತೆ . ಇದೆಲ್ಲದರ ಮಧ್ಯದಲ್ಲಿ ಒಂದು ಮುಖ್ಯವಾದ ವಿಚಾರ ಮರೆತಿದ್ದೆ .ನನ್ನ ಸಂಗೀತಾಭ್ಯಾಸ .ಶುರುವಾದ ವರ್ಷ ಸರಿಯಾಗಿ ನೆನಪಿಲ್ಲ .ಅಜ್ಜಿ ಇರುವಾಗಲೇ ಸೇರಿದ್ದೇ ಅವರು ಪರಲೋಕ ಯಾತ್ರೆ ಮಾಡಿದ್ದು ೧೯೯೨ ಇಸವಿ ಹಾಗಾಗಿ ಅದಕ್ಕಿಂತ ಮುಂಚೆ ಸೇರಿದ್ದೆ ಅಂತ ಭಾವಿಸಬಹುದು. ಚೆನ್ನಾಗಿ ಹಾಡ್ತೀನಿ ಅಂತ ಹೇಳುತ್ತಿದ್ದರು ಕೇಳಿದವರೆಲ್ಲ ಆದರೆ ಒಳಗೆ ನನಗೆ ಅನ್ನಿಸುತ್ತಿತ್ತು ವಿದೂಷಿ ಅಂತು ಆಗಲ್ಲ ಕಚೇರಿ ಕೊಡಲ್ಲ ಅಂತ . ಹೇಳಿಕೊತ್ತದ್ದನ್ನ ತಪ್ಪಿಲ್ಲದೆ ಕಲಿಯುತ್ತಿದ್ದೆ ಹಾಡುತ್ತಿದ್ದೆ ,ಜೂನಿಯರ್ ಪರೀಕ್ಷೆ ಕೂಡ ಪಾಸು ಆಯಿತು . ಸಂಗೀತ ಕಲಿಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ವಿದ್ಯಾರ್ಥಿ ವೇತನ ಕೊಡುತ್ತಾರೆ .ಒಂದ್ ಸಲ ಆ ಪರೀಕ್ಷೆಗೂ ಹೋಗಿದ್ದೆ .ಅಲ್ಲಿ ನಡೆದ ನನ್ನ ಸಂಗೀತ ಜ್ಞಾನದ ಪರೀಕ್ಷೆ ಯಲ್ಲಿ ನಡೆದ ಸಂಗತಿ ಜಗನ್ಮೋಹಿನಿ ರಾಗದ ಅಲೊಂಕಾರ ಗೀತೆ ಹಾಡು ಅಂದರು ಒಂದೆರಡು ನಿಮಿಷ ಹಾಡಿದ ನಂತರ ತಡೆದು ಕೆಳಗಿನ ಪ್ರಶ್ನೆ ಕೇಳಿದರು. ಪ್ರಶ್ನೆ :ಈ ಗೀತೆಯ ರಾಗದ ಜನಕ ರಾಗ ಯಾವುದು ? ನನಗೆ ತಕ್ಷಣ ಏನು ಹೇಳಬೇಕೋ ಗೊತ್ತಾಗಲಿಲ್ಲ ಯೋಚನೆ ಮಾಡಿದೆ ಆಮೇಲೆ ಮನಸ್ಸಿನಲ್ಲೇ ಆ ಗೀತಯನ್ನ ಹಾಡಿಕೊಂಡೆ . ಆ ಗೀತೆಯಲ್ಲಿ ಹೀಗೊಂದು ಸಾಲು ಇತ್ತು " ಜನಿತ ಜಗನ್ಮೋಹಿನಿ ರಾಗ " ಅಂತ ,ತಕ್ಷಣ ಹಿಂದೂ ಮುಂದು ಯೋಚಿಸದೆ ಜಗನ್ಮೋಹಿನಿ ಅಂದು ಬಿಟ್ಟೆ ಅಲ್ಲಿದ್ದ ಎಲ್ಲ ಪರೀಕ್ಷಕರು ಬಿದ್ದು ಬಿದ್ದು ನಗಕ್ಕೆ ಶುರು ಮಾಡಿದರು. ಜಗನ್ಮೋಹಿನಿ ರಾಗ ಜಗನ್ಮೊಹಿನಿಲೆ ಜನ್ಯನ ಅಂತ ಕೇಳಿದ್ರು ನಾನು ಹೂ ಗುಟ್ಟಿದೆ. ನನ್ನ ಅಪಾರ ಸಂಗೀತ ಜ್ಞಾನದ ಅರಿವಾಗಿ ಹೋಗಮ್ಮ ಸಾಕು ಅಂತ ಓಡಿಸಿದರು.

No comments: