ನಂದು ಅಂತ ಬ್ಲಾಗ್ ಮಾಡ್ಬೇಕಾದ್ರೆ ಕನ್ನಡದಲ್ಲಿ ಬರೆಯೋ ಯೋಚನೆ ಇರ್ಲಿಲ್ಲ .ಆದ್ರೆ ಮೊದಲಿಂದನೂ ಇಂಗ್ಲಿಷ್ ನಲ್ಲಿ ಬರೆಯೋದು ಅಂದ್ರೆ ಅಷ್ಟಕ್ಕಷ್ಟೇ ನಂಗೆ. ಭಾಷೆ ನೆ ಸರಿಯಾಗಿ ಬರಲ್ವೋ , ಇಷ್ಟ ಇಲ್ವೋ ಏನು ಕಾರಣನೋ ಗೊತ್ತಿಲ್ಲ .ನನ್ನ ಮೊಟ್ಟ ಮೊದಲ ಪೋಸ್ಟ್ ಬರಯಕ್ಕೆ ಸುಮಾರು ಎರಡು ಮೂರು ತಾಸು ತೊಗೊಂಡಿದ್ದೀನಿ. ಕನ್ನಡದಲ್ಲಿ ಅಷ್ಟು ಕಷ್ಟ ಆಗಲಾರದು ಅಂತ ಅನ್ಕೊಂಡು ಬರೆಯಕ್ಕೆ ಶುರು ಮಾಡಿದೆ .ನಾನೇನು ಕಥೆಗಾರಳಲ್ಲ ಕವಯಿತ್ರಿನೂ ಅಲ್ಲ.ಮನಸಿಗೆ ಬಂದದ್ದನ್ನ ಗೀಚಕ್ಕೆ ಇದೊಂದು ವೇದಿಕೆ ಅಷ್ಟೆ ನನಗೆ.ನನಗೆ ಬುದ್ಧಿ ತಿಳಿದಾಗಿನಿಂದ ಏನೇನು ಆಗಿದೆಯೋ ಅದರಲ್ಲಿ ನನಗೆ ಪ್ರಿಯವಾದ ಅಪ್ರಿಯವಾದ ಆದರೆ ಮತ್ತೆ ಮತ್ತೆ ನೆನಪು ಬರುವಂತಹ ಸಂಧರ್ಭಗಳನ್ನ ಎಲ್ಲಾರು ಬರೆದಿಡಬೇಕು ಅಂತಅಂದುಕೊಂಡಿದ್ದೆ .ಡೈರಿ ನೂ ಬರೆದಿದ್ದೆ ಆದರೆ ತೀರ ವೈಯಕ್ತಿಕ ವಿಷಯಗಳನ್ನ ಯಾರು ಓದಿಬಿಡ್ತಾರೋ ಅನ್ನೋ ಆತಂಕಕ್ಕೆ ಎಲ್ಲಾ ಬರೆಯುತ್ತಿರಲಿಲ್ಲ. ಇಲ್ಲಿ ನಾನು ಯಾರು ಅಂತ ಯಾರಿಗೂ ತಿಳಿಯುವ ಪ್ರಮೇಯ ಇಲ್ಲ ಅಂತ ಅಂದುಕೊಂಡು ಗೀಚುತಿದ್ದೀನಿ .
ನನಗೆ ನೆನಪಿರುವ ಮೊದಲ ವಿಷಯ ನಮ್ಮನೆಯ ಎದುರಿಗಿದ್ದ ತ್ರಿವೇಣಿ , ಅವಳ ಅಪ್ಪ ಅಮ್ಮ ನಾನು ಕೂಡ ಅಣ್ಣ,ಅಮ್ಮ ಅಂತ ಕರಿತಿದ್ದೆ .ನಾನು ಅವರೆಲ್ಲರ ಕಣ್ಮಣಿ "ಪುಟ್ಟು" .ಬಾಲ್ಯದ ಮುಕ್ಕಾಲು ಭಾಗ ಎಲ್ಲಾ ಅವ್ರ ಮನೆಯಲ್ಲೇ ಕಳೆದದ್ದು. ಎಲ್ಲಿ ಹೋದರು ನಾನು ಬಾಲದ ತರಹ ಹೊಗ್ತಿದ್ದೆ .ಮನೆಯಲ್ಲಿ ಊಟ ಮಾಡಕ್ಕೆ ರಾದ್ಧಾಂತ ಮಾಡುತಿದ್ದ ನಾನುಅವ್ರ ಮನೇಲಿಕಮಕ್ ಕಿಮಕ್ ಅನ್ನದೆ ಊಟ ಮಾಡ್ತಿದ್ದೆ .ಒಂದು ಸಲ ಅವರಮನೆಯಲ್ಲಿ ಹೊಸ ಹಾಸಿಗೆ ತಂದಿದ್ದರು , "ಪುಟ್ಟು , ಹೊಸ ಹಾಸಿಗೆ ಇವತ್ತು ,ನಮ್ಮ ಜೊತೆನೆ ಮಲ್ಕೋ" ಅಂತ ಮುದ್ದು ಮಾಡಿ ನನ್ನನ್ನ ಕರೆದುಕೊಂಡು ಹೋಗಿದ್ದಕ್ಕೆ ಮೊದಲನೆ ದಿನನೇ ಹಾಸಿಗೆ ಪಾವನ ಮಾಡಿ ಬಂದಿದ್ದೆ . ಆದರೂ ಒಬ್ಬರು ಕೂಡ ಬೇಜಾರು ಮಾಡಿಕೊಂಡಿರಲಿಲ್ಲ .ಅಣ್ಣ ಎಲ್ಲಿಗೆ ಹೋದರು ನನಗೆ ಏನಾದ್ರೂ ತಂದುಕೊಡ್ತಿದ್ರು .ಅವರ ಮನೇಲಿ ನನ್ನನ್ನ ಎತ್ಕೊಳಕ್ಕೆ ಯಾವಾಗಲು ಜಗಳ " ನಾ ಕರ್ಕೊಂಡು ಬಂದಿದ್ದು ನ ಕೊಡಲ್ಲ " ಅಂತ.ನೆನೆಸಿಕೊಂಡರೆ ಸಂತೋಷ ಆಗತ್ತೆ.ಹುಷಾರಿಲ್ಲದೆ ಇದ್ದಾಗ ಮನೆ ಮಗುಗಿಂತ ಹೆಚ್ಚಾಗಿ ನೋಡಿಕೊಂದ್ದು ಈಗಲೂ ನೆನಪಿದೆ . ಒಬ್ಬೊಬ್ಬರದ್ದೆ ಮದುವೆ ಆಯಿತು ,ಬೇರೆ ಮನೆಗೆ ಹೊರಟು ಹೋದ್ರು .ಆದರು ನನ್ನ ಹುಟ್ಟಿದಹಬ್ಬದ ದಿನ ಮಾತ್ರ ಯಾರು ಶುಭಾಶಯ ಹೇಳದೆ ಇದ್ರು ತ್ರಿವೇಣಿ ದು ಮಾತ್ರ ಗ್ಯಾರೆಂಟಿ . ಎರಡನೆಯ ವಿಷಯ ಸ್ಕೂಲಿಗೆ ಹೋಗ್ತಿದ್ದಿದ್ದು .ಸ್ಕೂಲಿಗೆ ಸೇರಿಸಿದ್ದು ಕೂಡ ತ್ರಿವೇಣಿ .ಬೆಳಗ್ಗೆ ಹೊತ್ತು ಹೇಗೋ ಹೋಗ್ತಿದ್ದೆ ಇಲ್ದೆ ಹೋದ್ರೆ ನಂಜಮ್ಮ ಬಿಡಬೇಕಲ್ಲ ,ನಂಜಮ್ಮ ನನ್ನನ್ನ ಸ್ಕೂಲಿಗೆ ಕರ್ಕೊಂಡು ಹೋಗುತಿದ್ದ ಅಜ್ಜಿ , ಆಯಾ ಅನ್ನೋ ಮನಸು ಬರಲ್ಲ.ಸುಮ್ಸುಮ್ನೆ ಕಾರಣ ಹೇಳಿ ಸ್ಕೂಲು ತಪ್ಪಿಸ್ಕೊತಿಯ ಬರ್ತ್ಯೋ ಇಲ್ವೋ ಸುಮ್ನೆ ? ಅಂತ ಬೈದು ಕೈ ಹಿಡ್ದು ಎಳಕೊಂಡು ಹೊಗೇಬಿಡವ್ಳು . ಎಲ್ಲಿದ್ದಳು ಯಾರ ಜೊತೆ ಇದ್ದಳು ಅನ್ನೋ ವಿಷಯ ಮಾತ್ರ ಇವತ್ತಿನ ವರೆಗೆ ಗೊತ್ತಿಲ್ಲ . ಮಧ್ಯಾಹ್ನ ಮಾತ್ರ ಏನೋ ಒಂದು ಕಾರಣ ಮಾಡಿ ಹೋಗ್ತಾನೆ ಇರ್ಲಿಲ್ಲ ,ಅಜ್ಜಿ ಇದ್ರು ಸಪೋರ್ಟ್ ಗೆ "ಇವತ್ತೊಂದ್ ದಿನ ಹೋಗದಿದ್ರೆ ಏನು ಆಗಲ್ಲ " ಅಂತ ಅಪ್ಪನಿಗೆ ಹೇಳಿ ಸುಮ್ನಾಗಿಸ್ಬಿಡ್ತಿದ್ರು .
-ಸಶೇಷ
No comments:
Post a Comment